ವಿನಾಯಕ ಕೃಷ್ಣ ಗೋಕಾಕ 

1909-1992. ವಿನಾಯಕ ಎಂಬ ಕಾವ್ಯನಾಮದಿಂದ ಖ್ಯಾತರಾಗಿದ್ದು ಕನ್ನಡ ಸಾಂಸ್ಕøತಿಕ ಕ್ಷೇತ್ರವನ್ನು ರಾಷ್ಟ್ರೀಯ ಮಟ್ಟಕ್ಕೇರಿಸಿದ ಮೇಧಾವಿಗಳು. ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು. ಕನ್ನಡ ಸಾಹಿತ್ಯದಲ್ಲಿ ನವ್ಯತೆಗೆ ಭದ್ರ ಬುನಾದಿ ಹಾಕಿದವರು ಇವರು ಎನ್ನಲಾಗಿದೆ. ಕವಿ, ಕಾದಂಬರಿಕಾರ, ವಿಮರ್ಶಕ, ವಾಗ್ಮಿ, ಶಿಕ್ಷಣ ತಜ್ಞ ಎಂದಿವರನ್ನು ಜನತೆ ಗುರುತಿಸಿದೆ. ಇವರು ಹುಟ್ಟಿದ್ದು ಸವಣೂರಿನಲ್ಲಿ ಆಗಸ್ಟ್ 9, 1909. ಇವರ ಬಾಲ್ಯದ ಶಿಕ್ಷಣ ಸವಣೂರಿನಲ್ಲೂ ಉಚ್ಚ ಶಿಕ್ಷಣ ಧಾರವಾಡದಲ್ಲೂ ಜರುಗಿದುವು. ಅನಂತರ ಇವರು ಉನ್ನತ ಶಿಕ್ಷಣಕ್ಕಾಗಿ ಆಕ್ಸ್‍ಫರ್ಡಿಗೆ (1936) ಹೋಗಿಬಂದರು. ಧಾರವಾಡದಲ್ಲಿ ಓದುವಾಗ ಬೇಂದ್ರೆ ಮುಗಳಿ ಅಂಥವರ ಸಹವಾಸದಲ್ಲಿ ಕನ್ನಡ ಅಭಿವ್ಯಕ್ತಿ, ಸಾಮಥ್ರ್ಯಗಳತ್ತ ಇವರ ಮನಸ್ಸು ತಿರುಗಿತು. ಇಂಗ್ಲಿಷ್ ಸಾಹಿತ್ಯಕ ಶಬ್ದಗಳ ಶಕ್ತಿಯುತ ಸ್ಥಾಣು ಕನ್ನಡ ರೂಪಗಳನ್ನು ಹುಡುಕುವತ್ತ ತಮ್ಮ ಪ್ರತಿಭೆಯನ್ನು ಹರಿಸಿದರು. ಬೇಂದ್ರೆ ಮುಂದಾಳಾದ ಗೆಳೆಯರ ಗುಂಪು ಸಾಹಿತ್ಯ ಸಂಸ್ಥೆಯ ಸ-'ಫಲ-ತೆಯ ದ್ಯೋತಕವೆಂದು ಪರಿಗಣಿಸಲ್ಪಟ್ಟರು. ಸ್ಥಳೀಯ ಬಿ. ಎ. ಮತ್ತು ಎಂ.ಎ.ಗಳಲ್ಲೂ ಆಕ್ಸ್‍ಫರ್ಡಿನ ಬಿ.ಎ.ಯಲ್ಲೂ ಪ್ರಥಮ ವರ್ಗ ಪಡೆದರು. 

	ತಮ್ಮ ತುಂಬುಜೀವನದಲ್ಲಿವರು ಬಹುಕಾಲ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಅಧ್ಯಾಪಕ ವೃತ್ತಿಗೆ ಇವರು ಇಳಿದದ್ದು 1931ರಲ್ಲಿ. ಅನಂತರ 1940ರಲ್ಲಿ ಸಾಂಗ್ಲಿಯ ವಿಲಿಂಗ್‍ಡನ್ ಕಾಲೇಜಿನ ಮುಖ್ಯಸ್ಥರಾದರು. 1945ರಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. 1946ರಲ್ಲಿ ವೀಸನಗರ ಕಾಲೇಜಿನ ಮುಖ್ಯಸ್ಥರಾದರು. 1949ರಲ್ಲಿ ಕೊಲ್ಹಾಪುರದ ರಾಜಾರಾಂ ಕಾಲೇಜಿನ ಮುಖ್ಯಸ್ಥರಾದರು. 1952ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನ ಮುಖ್ಯಸ್ಥರಾಗಿದ್ದು 1959ರಲ್ಲಿ ಹೈದರಾಬಾದಿನ ಸೆಂಟ್ರಲ್ ಇನ್ಸ್‍ಟಿಟ್ಯೂಟ್ ಆಫ್ ಇಂಗ್ಲಿಷ್ ಸಂಸ್ಥೆಯ ನಿರ್ದೇಶಕರಾದರು. ಇವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದದ್ದು 1966ರಲ್ಲಿ ಅನಂತರ ಇವರು ಕೆಲಕಾಲ ಸಿಮ್ಲದ ಇನ್ಸ್‍ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿದ್ದರು. 

	ಗೋಕಾಕರು ಇಂಗ್ಲೆಂಡಿಗೆ ಮೂರು ಬಾರಿ ಹೋಗಿ ಬಂದುದಲ್ಲದೆ ಜಪಾನಿಗೂ (1957) ಅಮೆರಿಕದ ಸಂಯುಕ್ತಸಂಸ್ಥಾನಗಳಿಗೂ (1958) ಬೆಲ್ಜಿಯಮಿಗೂ (1959) ಪೂರ್ವ ಆಫ್ರಿಕಕ್ಕೂ (1960) ಭೇಟಿ ಕೊಟ್ಟಿದ್ದರು. 

	ಕವಿಗಳೂ ವಿಮರ್ಶಕರೂ ಶಿಕ್ಷಣ ತಜ್ಞರೂ ಆದ ಗೋಕಾಕರನ್ನು ನಾಡು ಅನೇಕ ಬಗೆಯಲ್ಲಿ ಗೌರವಿಸಿದೆ. ರಾಯಚೂರು ಸಾಹಿತ್ಯ ಸಮ್ಮೇಳದ ಕವಿಗೋಷ್ಠಿ (1934). ಮುಂಬೈ ಸಾಹಿತ್ಯ ಸಮ್ಮೇಳದ ಕವಿಗೋಷ್ಠಿ (1950) ಮತ್ತು ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷಗಿರಿ (1958); ಪಿ. ಇ. ಎನ್. ಅಧಿವೇಶನ (1957) ಮತ್ತು ಅಂತರರಾಷ್ಟ್ರೀಯ ಕವಿಮೇಳಗಳ (1955) ಸದಸ್ಯತ್ವ; ದ್ಯಾವಾಪೃಥವೀ ಕೃತಿಗಾಗಿ ಭಾರತದ ಸಾಹಿತ್ಯ ಅಕಾಡಮಿಯ ಬಹುಮಾನ (1960); ಪದ್ಮಶ್ರೀ ಪ್ರಶಸ್ತಿ (1960); ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ (1967); ಇವರ ಜೀವಮಾನದ ಶಿಖರ ಪ್ರಾಯವಾದ ಕೃತಿಯಾಗಿ ಹೊರ ಹೊಮ್ಮಿದ ಮಹಾಕಾವ್ಯ `ಭಾರತ ಸಿಂಧುರಶ್ಮಿ 1982, ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತು. ವಿನಾಯಕ ವಾಙ್ಮಯ ಪ್ರಶಸ್ತಿ ಗ್ರಂಥ ಸಮರ್ಪಣೆ (1909)- ಇತ್ಯಾದಿ ಗೌರವಗಳು ಇವರಿಗೆ ಸಂದಿವೆ. 

	ಕಲೋಪಾಸಕ (1934) ಇವರ ಪ್ರಥಮ ಕಾವ್ಯ. ಹೊಸಗನ್ನಡ ಕಾವ್ಯದ ಮಾನವೀಯತೆ, ಭಾವತೀಕ್ಷ್ಣತೆ ಹಾಗೂ ಪ್ರಯೋಗಶೀಲತೆಯ ಲಕ್ಷಣಗಳನ್ನು ಈ ಕೃತಿ ಸ್ಫುಟಗೊಳಿಸುವುದಲ್ಲದೆ ಕನ್ನಡತನವನ್ನೂ ಸ್ಥಾನಿಕತೆಯನ್ನೂ ಕಾಯ್ದುಕೊಂಡಿದೆ. ಸರಳ ರಗಳೆಯ ನೂತನ ಅಭಿವ್ಯಕ್ತಿ ಪಯಣ (1937) ಎಂಬ ಗ್ರಂಥ. ಭಾವಗೀತೆಯ ವಿಧವಿಧ ಛಂದೋವಿಲಾಸಗಳನ್ನು ಭಾವ ವೈವಿಧ್ಯಕ್ಕೆ ಪಟುವಾಗಿ ಅಳವಡಿಸಿದ ಶ್ರೇಷ್ಠ ಸಂಕಲನವಿದು. ಇಜ್ಜೋಡು (1934) ಲೋಕಾನುಭವದಿಂದ ತುಂಬಿದ ಮಾರ್ಗದರ್ಶಿ ಕಾದಂಬರಿಗಳಲ್ಲೊಂದು. ಈ ಕೃತಿಯ ಬಗ್ಗೆ ಮುಂದೆ ಎರಡು ಮಾತು ಹೇಳಿದೆ. ತ್ರಿವಿಕ್ರಮರ ಆಕಾಶಗಂಗೆ (1945) ತಡವಾಗಿ ಪ್ರಕಟವಾದರೂ ಇದೇ ಸಮಯದ ವರೆಗಿನ ಆತ್ಮಿಕ ಜೀವನವನ್ನು ನಿಗೂಢವಾಗಿ ಚಿತ್ರಿಸುವ ಹೊಸ ಬಗೆಯ ಚಂಪೂ ಕೃತಿ; ಮಹತ್ತ್ವದ್ದಾದರೂ ಸಹೃದಯರ ದುರ್ಲಕ್ಷ್ಯಕ್ಕೀಡಾಗಿದೆ. 1936ರಲ್ಲಿ ಹಡಗಿನಿಂದ ಆಕ್ಸ್‍ಫರ್ಡಿಗೆ ಹೊರಟಾಗ ಹಡಗಿನ ತೂಗಾಟ ಹೊಸ ಗದ್ಯ ಕಾವ್ಯದ ಸಮರ್ಥ ರೂಪಗಳನ್ನು ಗೋಕಾಕರಲ್ಲಿ ರೂಪಿಸಿತು. ಅದರ ಫಲವೇ ಸಮುದ್ರ ಗೀತೆಗಳು (1940). ಕನ್ನಡ ಕಾವ್ಯ ಪಡೆದ ವಿಸ್ತಾರಕ್ಕೆ ಇದೊಂದು ದೊಡ್ಡ ಕೊಡುಗೆ. ಸಮುದ್ರದಾಚೆಯಿಂದ (1938) ಪ್ರವಾಸ ಸಾಹಿತ್ಯದ ಸವಿಯನ್ನು ಕನ್ನಡಿಗರಿಗೆ ಉಣ್ಣಿಸಿದ ಕೃತಿ; ಪತ್ರರೂಪದಿಂದ ಪ್ರಕಟವಾಗಿ ಕಾಲಿಕ ಅಗತ್ಯಕ್ಕೆ ಸಾರ್ವಕಾಲಿಕ ರುಚಿ ಕೊಟ್ಟಿರುವ ಪುಸ್ತಕ. ಯುದ್ಧೋತ್ತರ ಸ್ವಾತಂತ್ರ್ಯಪೂರ್ವ ಕಷ್ಟಕಾಲದಲ್ಲಿ ಜಾಗತಿಕ ಪ್ರಗತಿಶೀಲತೆಯತ್ತ ಗೋಕಾಕರ ಮನಸ್ಸು ಹೊರಳಿತು. ಅಭ್ಯುದಯ ಎಂಬ ಇವರ ಕವನಸಂಕಲನವೂ (1946) ಸಾಹಿತ್ಯದಲ್ಲಿ ಪ್ರಗತಿ ಎಂಬ ಇವರ ವಿಮರ್ಶನ ಗ್ರಂಥವೂ (1944) ಪ್ರಗತಿಶೀಲತೆಯಲ್ಲೂ ಕನ್ನಡತನವನ್ನು ಅನುಮೋದಿಸುತ್ತವೆ. ಸ್ವಾತಂತ್ರ್ಯೋತ್ತರ ವಿಪರ್ಯಸ್ತಯುಗದ ಅಭಿವ್ಯಕ್ತಿಯಾಗಿ ಬಂದ ಹಿಗ್ಗು (1950) ಮತ್ತು ನವ್ಯಕವಿತೆಗಳು (1950) ಎಂಬ ಹೊತ್ತಗೆಗಳು ಬುದ್ಧಿಭಾವಗಳನ್ನು ಒಂದು ರಸವಾಗಿ ಎರಕ ಹೊಯ್ಯುವ ರಸಕೃತಿಗಳಾಗಿವೆ. ಹೊಸ ಛಂದೋಮಾರ್ಗಗಳ ತುಳಿತದಿಂದ ಹೊಸ ಭಾವಾಭಿವ್ಯಕ್ತಿಯನ್ನು ಸಾಧಿಸಿ ನವ್ಯಮಾರ್ಗವನ್ನು ಕನ್ನಡಕ್ಕೆ ಇಲ್ಲಿನ ಕವನಗಳು ನೀಡಿದವು. ನವ್ಯ ಕಾವ್ಯ ಇಲ್ಲಿಯೇ ಪ್ರಾರಂಭವಾಯಿತೆನ್ನಬಹುದು. ಅದು ಅನಂತರ ತಾಂತ್ರಿಕ ಹೊಸತನಕ್ಕೆ ಮಾರುಹೋದ ಸಂದರ್ಭದಲ್ಲಿ ಗೋಕಾಕರ ಸೃಜನಶೀಲತೆ ಚಿಂತನಪರವಾಯಿತು. ಬಾಳದೇಗುಲದಲ್ಲಿ (1955), ಉಗಮ (1955), ದ್ಯಾವಾಪೃಥಿವಿ (1957), ಕಾಶ್ಮೀರ (1962)- ಇವು ಚಿಂತನಪರತೆಯ ಲಾಲಿತ್ಯ, ವಿಸ್ತಾರ, ಸುವಹತೆಗಳಿದ ಕೂಡಿವೆ. ಈ ವರೆಗೆ ಹೊಸ ಹೊಸ ಪ್ರಯೋಗಗಳ ಕಲ್ಲುತಗ್ಗುಗಳ ನಡುವೆ ಭೋರೆಂದು ಹರಿಯುತ್ತಿದ್ದ ಗೋಕಾಕರ ಪ್ರತಿಭೆ ಇಂಥ ಸದ್ದಿಲ್ಲದ ವಿಸ್ತಾರದತ್ತ ಹೊರಳಿದುದು ಅವರ ಆಂತರಿಕ ಜೀವನದ ನೈಸರ್ಗಿಕ ಬೆಳವಣಿಗೆಯನ್ನು ಸೂಚಿಸುತ್ತದೆ. ಇಂಥ ಬೆಳೆವಣಿಗೆಯನ್ನು ನಾವು ಎಲಿಯಟ್ ಮತ್ತು ಆಡೆನ್‍ರಲ್ಲಿ ಕಾಣುತ್ತೇವೆ. ಆಕಾಶಗಂಗೆಯಲ್ಲಿ ಕಂಡ ಪ್ರಕಾರ ವಿಭಿನ್ನತೆಯ ದರ್ಶನ ಹಿಗ್ಗಿ ಬಾಳದೇಗುಲದಲ್ಲಿ ಎಂಬ ಕಾವ್ಯದಲ್ಲಿ ಜೀವನವನ್ನು ಗುರುತಿಸುವ ಪುರಾಣದರ್ಶವಾಗಿದೆ (ಎಪಿಕ್ ವಿಷನ್). ವ್ಯಕ್ತಿವ್ಯಕ್ತಿಗಳ ಸ್ತೋತ್ರಾರ್ಹ ಗುಣಗಳನ್ನು ಅದು ಬಣ್ಣಿಸಿದರೂ ತನ್ನ ವಿಮರ್ಶಕಗುಣವನ್ನು ಬಿಡದೆ, ತನ್ನ ವ್ಯಕ್ತಿಗತ ಮನೋಧರ್ಮದ ಬೆಳೆವಣಿಗೆಯಲ್ಲಿ ಅವರನ್ನು ಪಾಲುಗಾರರನ್ನಾಗಿ ಮಾಡುತ್ತದೆ. ಊರ್ಣನಾಭದಲ್ಲಿ (1961) ಮತ್ತೆ ತಾಂತ್ರಿಕ ಪ್ರಯೋಗಶೀಲತೆ, ಇಂದಿಲ್ಲ ನಾಳೆ (1965) ಎಂಬ ಕೃತಿಯಲ್ಲಿ ಮತೆ ಚಂಪೂ ಪ್ರಯೋಗ, ತ್ರಿಶಂಕುವಿನ ಪ್ರಜ್ಞಾ, ಪ್ರಭಾತ (1965) ಮತ್ತು ಪುಣ್ಯಭೂಮಿಗಳಲ್ಲಿ (1966) ಮತೆ ಬುದ್ಧಿಭಾವಗಳ ಎರಕ ಕಂಡುಬಂದಿವೆ. ಇತ್ತೀಚೆಗಿನ ಭಾವರಾಗ ಎಂಬ ಗ್ರಂಥ (1969) ಪಯಣವೆಂಬ ಸಂಗ್ರಹದ ಕೋಮಲ ಭಾವ ಪರತೆಯನ್ನು ಛಂದಸ್ಸಿನ ಶಾಸನಕ್ಕೆ ಸಮರ್ಥವಾಗಿ ಇಳಿಸಿದ ಕವಿಪ್ರತಿಭೆ ಇನ್ನೂ ಯಾವ ಹೊಸ ದಾರಿ ತುಳಿದೀತೆಂಬ ನೇಮಕಗಳನ್ನು ಕಾಣಿಸುವುದಿಲ್ಲ. ಗೋಕಾಕರೇ ಹುಟ್ಟಿಸಿದ ನವ್ಯಕಾವ್ಯದಿಂದ ಪ್ರಬುದ್ಧಗೊಂಡ ಹೊಸ ಪೀಳಿಗೆಯ ವಿಮರ್ಶಕರ ಕಣ್ಣಿಗೆ ಅವರ ಚಿಂತರನಪರ ಕಾವ್ಯವೊಂದೇ ಕಂಡದ್ದು ವಿಪರ್ಯಾಸಕ್ಕೆ ಕಾರಣವಾಗಿದೆ. ಇಜ್ಜೋಡು ಕಾದಂಬರಿ ಬೆಳೆದು ಸಮರಸವೇ ಜೀವನ (1967) ಎಂಬ ಮಹಾಕಾದಂಬರಿಯಾಯಿತು. 1268 ಪುಟಗಳಷ್ಟು ದೊಡ್ಡದಾಗಿರುವ ಈ ಕಾದಂಬರಿ ತನ್ನ ವೈಶಾಲ್ಯಕ್ಕೆ ಕ್ಷೇತ್ರಬಾಹುಳ್ಯಕ್ಕೆ ಪಾತ್ರಬಾಹುಳ್ಯಕ್ಕೆ ಅಗತ್ಯವಾದ ಸಂವಿಧಾನ ಕೌಶಲವನ್ನು ಜೀವನಾನುಭವವನ್ನು ದರ್ಶನವನ್ನು ಪ್ರದರ್ಶಿಸುತ್ತದೆ. ಸ್ಥಾನಿಕತೆಯಿಂದ ಸಾರ್ವಭೌಮಿಕತೆಯತ್ತ ಈ ಕಾದಂಬರಿ ತಿರುಗಿರುವ ಅಂಶವನ್ನು ಮರೆಯಲಾಗದು.

	ದ್ಯಾವಾ ಪೃಥಿವಿಯಲ್ಲಿ ಪರಸ್ಪರ ಪೂರಕವಾದ ನೀರದ ಮತ್ತು ಇಳಾಗೀತವೆಂಬ ಎರಡು ಭಾಗಗಳಿವೆ. ನೆಲದಲ್ಲಿ ನಿಂತು ಆಕಾಶವನ್ನು ಕಂಡ ಪರಿ ನೀರದದಲ್ಲಿ ಅಭಿವ್ಯಕ್ತವಾದರೆ ಆಕಾಶದಿಂದ ನೆಲದತ್ತ ಹಾಯಿಸಿದ ದೃಷ್ಟಿ ಇಳಾಗೀತದಲ್ಲಿ ಕಾಣುತ್ತದೆ. ನೀರದದಲ್ಲಿ ಮೋಡಕಾಮರೂಪಿಯಾಗಿ, ಮತ್ರ್ಯಜೀವನಕ್ಕೊಡ್ಡಿದ ಬಹುಬಗೆಯ ಪ್ರತಿಮೆಯಾಗಿ ನಾನಾರ್ಥ ವ್ಯಂಜಕವಾಗಿ ಕಾಣಿಸಿಕೊಳ್ಳುತ್ತದೆಯಲ್ಲದೆ ಒಮ್ಮೊಮ್ಮೆ ಒಂದೊಂದು ತತ್ತ್ವವನ್ನು ಪ್ರಕಟಿಸುತ್ತದೆ. ಇಳಾಗೀತದಲ್ಲಿ, ಕವಿ ಬೆಳಗಾಂವಿಯಿಂದ ದಿಲ್ಲಿಯ ವರೆಗೆ ವಿಮಾನಯಾನ ಮಾಡಿದಾಗ ಕಂಡ ದೃಶ್ಯಗಳು ವಿವಿಧ ಪ್ರತಿಮೆಗಳಾಗಿ ಬರುತ್ತವೆ. ಒಟ್ಟು ಕೃತಿಯ ಉದ್ದಕ್ಕೂ ಕವಿಯ ಕಲ್ಪನಾವಿಲಾಸ, ಚಿಂತನಪರತೆ, ಪುರಾಣಪರಿಜ್ಞಾನ, ಆಧ್ಯಾತ್ಮಿಕ ಶ್ರದ್ಧೆ, ವೈಜ್ಞಾನಿಕ ದೃಷ್ಟಿ- ಇವೆಲ್ಲ ವೇದ್ಯವಾಗುತ್ತವೆ. 

	ಗೋಕಾಕರ ವಿಮರ್ಶಾಶಾಸ್ತ್ರ ಕೇವಲ ಇಂಗ್ಲಿಷ್ ವಿಮರ್ಶೆಗೆ ಎಂದೂ ಮಾರು ಹೋಗಿಲ್ಲ. ಕನ್ನಡ ನೆಲದಿಂದ ಅದು ಪುನಃಪುನಃ ಶಕ್ತಿ ಪಡೆದಿದೆಯಲ್ಲದೆ ಮಾರ್ಗದರ್ಶಿಯೂ ಆಗಿದೆ. ಕನ್ನಡದಲ್ಲಿ ಏನೂ ಇಲ್ಲದಾಗ- ಕವಿಕಾವ್ಯ ಮಹೋನ್ನತಿ (1945) ಎಂಬ ಇವರ ಕೃತಿ ಬಂತು. ರಸಕಾವ್ಯ ಪ್ರಗಲ್ಭಗೊಂಡಾಗ - ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು (1946) ಎಂಬ ಗ್ರಂಥ ಬಂತು. ನವ್ಯಕಾವ್ಯ ಬಲಿತು ತನ್ನನ್ನೆ ತಾನು ಅರಿಯಲು ಯತ್ನಿಸುತ್ತಿದ್ದಾಗ- ನವ್ಯತೆ ಮತ್ತು ಕಾವ್ಯಜೀವನ (1955) ಎಂಬು ಕೃತಿ ಬಂತು. ನವ್ಯತೆ ಮತ್ತು ಸಂಪ್ರದಾಯಗಳಲ್ಲಿ ಆತ್ಮಘಾತಕ ತಿಕ್ಕಾಟ ಬೆಳೆದಾಗ- ಸಮನ್ವಯ ಸೂತ್ರಗಳು ಎಂಬ ಕೃತಿ ಬಂತು. ಹೀಗೆ ಸಾಮಯಿಕ ಪ್ರಜ್ಞೆ ಗೋಕಾಕರ ವಿಮರ್ಶೆಯ ಗುಣವಾಗಿದೆ. ಇವರ ನಾಟಕಗಳು ಇದೇ ಯಶಸ್ಸನ್ನು ಪಡೆದಾವೆಂದು ಹೇಳಲಾಗದು. ಆದರೆ ಅವು ಪ್ರಯೋಗಶೀಲವಾಗಿವೆ. ಇವರ ಪ್ರತಿಭೆ ಮೊದಲಿನಿಂದ ಕೊನೆಯವರೆಗೆ ಕನ್ನಡತನದತ್ತ ಒಲಿದಿದೆ. 

	ಗೋಕಾಕರು ಇಂಗ್ಲಿಷಿನಲ್ಲೂ ಕೃತಿರಚನೆ ಮಾಡಿದ್ದಾರೆ; ದಿ ಸಾಂಗ್ ಆಫ್ ಲೈಫ್ ಆಂಡ್ ಅದರ್ ಪೊಯೆಮ್ಸ್ (1947). ದಿ ಪೊಯಟಿಕ್ ಅಪ್ರೋಚ್ ಟು ಲ್ಯಾಂಗ್ವೇಜ್ (1952), ಇಂಗ್ಲಿಷ್ ಇನ್ ಇಂಡಿಯ: ಇಟ್ಸ್ ಪ್ರೆಸೆಂಟ್ ಅಂಡ್ ಫ್ಯೂಚರ್ (1964). ಇನ್ ಲೈಫ್ಸ್ ಟೆಂಪಲ್ (1965). ಗೋಕಾಕರು ಇಂಗ್ಲಿಷಿನಲ್ಲಿ ಕಾವ್ಯವಿಮರ್ಶೆ ಮಾಡಿದ್ದಾರಲ್ಲದೆ ಸ್ವತಂತ್ರ ಭಾರತದಲ್ಲಿ ಇಂಗ್ಲಿಷ್ ನಿರ್ವಹಿಸಬೇಕಾದ ಕಾರ್ಯವನ್ನು ನಿಟ್ಟುಗೊಳಿಸುವಲ್ಲಿ ವಿನಾಯಕರು ಕೆಲಸ ಮಾಡಿದ್ದರು. ಇವರು ಏಪ್ರಿಲ್ 28, 1992ರಂದು ಮೃತಪಟ್ಟರು.								    (ಎಸ್.ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ